ದಖನ್ -
ಸಂಸ್ಕøತದ  ದಕ್ಷಿಣ ಎಂಬ ಶಬ್ಧದ ಅಪಭ್ರಂಶ.  ಉತ್ತರದಲ್ಲಿ ವಿಂಧ್ಯ ಪರ್ವತ ಮತ್ತು ನರ್ಮದಾ ನದಿ, ದಕ್ಷಿಣದಲ್ಲಿ ಕನ್ಯಾಕುಮಾರಿ ಭೂಶಿರ - ಇವುಗಳ ನಡುವೆ ಇಡೀ ದಕ್ಷಿಣ ಭಾರತ ಅಥವಾ ಪರ್ಯಾಯದ್ವೀಪೀಯ ಭಾರತವನ್ನು ಹಿಂದೆ ದಕ್ಷಿಣ ಅಥವಾ ದಕ್ಷಿಣಾಪಥ ಎಂದು ಕರೆಯಲಾಗುತ್ತಿತ್ತು.  ವಿಂಧ್ಯ - ನರ್ಮದಾ ಪ್ರದೇಶದಿಂದ ಕೃಷ್ಣಾ - ತುಂಗಭದ್ರಾ ಪ್ರದೇಶದ ವರೆಗಿನ ಪ್ರಸ್ಥಭೂಮಿ ಪ್ರದೇಶಕ್ಕೆ ದಖನ್ ಎಂಬ ಹೆಸರು ಅನಂತರ ಬಂತು.  ಉ.ಅ. 120 - 210 ಗಳ ನಡುವಣ ಪ್ರದೇಶ ಸ್ಥೂಲವಾಗಿ ದಖನ್ ಎನಿಸಿಕೊಂಡಿದೆ. ದಖನ್ ಪ್ರಸ್ಥಭೂಮಿಯ ಸಾಮಾನ್ಯವ ಔನತ್ಯ 2,000 ಅಡಿ.  ಪಶ್ಚಿಮ ಮತ್ತು ಪೂರ್ವದಲ್ಲಿಯ ಘಟ್ಟಗಳ ಬಳಿಯಲ್ಲಿ ಅದರ ಎತ್ತರ ಹೆಚ್ಚುತ್ತದೆ.  ಪೂರ್ವ - ಪಶ್ಚಿಮ ಘಟ್ಟಗಳು ಸೇರುವ ನೀಲಗಿರಿಯ ಬಳಿ ಅದು ಗರಿಷ್ಠ ಎತ್ತರ ಮುಟ್ಟುತ್ತದೆ.  ದಖನ್ನಿನ ಉಳಿದ ಭಾಗಕ್ಕಿಂತ ಕರ್ನಾಟಕ ಭಾಗ ಹೆಚ್ಚು ಎತ್ತರವಾಗಿದೆ.  ಇಡೀ ಪ್ರದೇಶ ಸಾಮಾನ್ಯವಾಗಿ ಪೂರ್ವದ ಕಡೆಗೆ ಇಳಿಜಾರಾಗಿದೆ. ಪಶ್ಚಿಮ ಘಟ್ಟಗಳ ಕವಲುಗಳೂ ಇತರ ಕೆಲವು ಶ್ರೇಣಿಗಳೂ ಅಲ್ಲಲ್ಲಿ ಮೇಲೆದ್ದಿವೆ.  ಅಹಮದ್‍ನಗರವನ್ನೊಳಗೊಂಡ ತ್ರಿಕೋನಾತ್ಮಕ ಪ್ರಸ್ಥಭೂಮಿಯ ಅಂಚುಗಳಲ್ಲಿರುವ ಎರಡು ಶ್ರೇಣಿಗಳು ಗೋದಾವರಿ ಮತ್ತು ಭೀಮಾ ನದಿಗಳ ಜಲಾನಯನ ಪ್ರದೇಶಗಳನ್ನು ಪ್ರತ್ಯೇಕಿಸುತ್ತದೆ. ಭೀಮಾ ಮತ್ತು ಕೃಷ್ಣಾ ನದಿಗಳ ಜಲಾನಯನ  ಭೂಮಿಗಳ ನಡುವೆ ಮಹಾದೇವ ಶ್ರೇಣಿಯಿದೆ.  ಪೂರ್ವ ಘಟ್ಟಗಳಿಗೆ ಸೇರಿದಂತೆ ಪ್ರಸ್ಥಭೂಮಿಯೊಳಕ್ಕೆ ಹರಿದಿರುವ ಶ್ರೇಣಿಗಳ ಪೈಕಿ ನಲ್ಲಮಲೈ ಒಂದು.  ಕೃಷ್ಣಾ ನದಿಯ ದಂಡೆಯಿಂದ ಪೆನ್ನಾರ್ ಕಣಿವೆಯ ವರೆಗೆ ಉತ್ತರ-ದಕ್ಷಿಣವಾಗಿ ಹಬ್ಬಿರುವ ಇದು ಕಡಪಾ ಕ್ವಾಟ್ರ್ಸ್ ಮತ್ತು ಸ್ಲೇಟ್ ಶಿಲೆಗಳಿಂದ ಕೂಡಿದ್ದು.  ನಲ್ಲಮಲೈ ಪಶ್ಚಿಮದಲ್ಲಿ ಎರ್ರಮಲೈ ಇದೆ.   ಕರ್ನಾಟಕದ ಆಗ್ನೇಯ ಮತ್ತು ದಕ್ಷಿಣ ಭಾಗ ಗ್ರಾನೈಟ್ ಮತ್ತು ನೀಸ್ ಶಿಲೆಗಳಿಂದ ಕೂಡಿದೆ.  ಅಲ್ಲಲ್ಲಿ ದುಂಡನೆಯ ಶಿಖರಗಳಂತೆ ಬೆಟ್ಟಗಳು ಮೇಲೆದ್ದಿವೆ.

ಅರಬ್ಬೀ ಸಮುದ್ರದಿಂದ ಬರುವ ಮುಂಗಾರು ಮಾರುತಕ್ಕೆ ಎದುರಾಗಿ ನಿಂತಿರುವ ಪಶ್ಚಿಮ ಘಟ್ಟಗಳ ಆಚೀಚೆ ಬದಿಗಳ ಪ್ರದೇಶಗಳಲ್ಲಿಯ ಮಳೆಯಲ್ಲಿ ತುಂಬ ವ್ಯತ್ಯಾಸವುಂಟು.  ಪಶ್ಚಿಮ ಘಟ್ಟಗಳ ಪಶ್ಚಿಮಕ್ಕೆ 300" ಗಿಂತ ಹೆಚ್ಚು ಮಳೆ; ಪೂರ್ವ ಭಾಗದ ಹಲವೆಡೆ 40" ಗಿಂತ ಕಡಿಮೆ.  ತತ್ಫಲವಾಗಿ ಸಸ್ಯದಲ್ಲೂ ವ್ಯತ್ಯಾಸ ಕಂಡುಬರುತ್ತದೆ.  ಪಶ್ಚಿಮ ಭಾಗದಲ್ಲಿ ಮಳೆಗಾಡುಗಳು ದಟ್ಟವಾಗಿವೆ.  ಕರಾವಳಿಯಲ್ಲಿ ತೆಂಗು ವಿಶೇಷ. ಪೂರ್ವದ ಪ್ರಸ್ಥಭೂಮಿ ಪ್ರದೇಶಗಳಲ್ಲಿ ಪರ್ಣಪಾತಿ ಸಸ್ಯಗಳು  ಬೆಳೆಯುತ್ತವೆ.

ದಖನ್ನಿನ ನದಿಗಳು ಸಾಮಾನ್ಯವಾಗಿ ಪಶ್ಚಿಮದಿಂದ ಪೂರ್ವಾಭಿಮುಖವಾಗಿ ಹರಿಯುತ್ತದೆ.  ಇದಕ್ಕೆ ಅಪವಾದವಾಗಿರುವ ನದಿಗಳ ಪೈಕಿ ಪ್ರಮುಖವಾದವು ನರ್ಮದಾ ಮತ್ತು ತಾಪಿ.  ಪ್ರಸ್ಥಭೂಮಿಯಲ್ಲಿ ಪೂರ್ವಾಭಿಮುಖವಾಗಿ ಹರಿಯುವ ಮೂರು ಮುಖ್ಯ ನದಿಗಳು ಗೋದಾವರಿ, ಕೃಷ್ಣಾ ಮತ್ತು ಕಾವೇರಿ.  ಮಹಾನದಿ ಇನ್ನೊಂದು.  ಭಾರತದಲ್ಲಿ ಗಂಗೆಯನ್ನು ಬಿಟ್ಟರೆ ಗೋದಾವರಿಯೇ ಅತ್ಯಂತ ದೊಡ್ಡ ನದಿ.  ದಖನ್ನಿನ ನದಿಗಳಲ್ಲಿ ಅತ್ಯಂತ ವಿಸ್ತಾರವಾದ ಜಲಾನಯನ ಪ್ರದೇಶವುಳ್ಳ ನದಿ ಕೃಷ್ಣಾ.  ತುಂಗಭದ್ರಾ ಇದರ ಅತ್ಯಂತ ಮುಖ್ಯ ಉಪನದಿ. ದಕ್ಷಿಣ ಭಾರತದ ಇತಿಹಾಸದಲ್ಲಿ ತುಂಗಭದ್ರಾ ನದಿ ಅನೇಕ ಸಾಮ್ರಾಜ್ಯಗಳ ಸಹಜವಾದ ಎಲ್ಲೆ ಕಟ್ಟಾಗಿ ಪಾತ್ರವಹಿಸಿದೆ.   ವಿಜಯನಗರ ಸಾಮ್ರಾಜ್ಯದ ರಾಜಧಾನಿ ಇದ್ದದ್ದು ತುಂಗಭದ್ರಾ ನದಿಯ ದಂಡೆಯ ಮೇಲೆ.  ತುಂಗಭದ್ರಾ ಮತ್ತು ಕೃಷ್ಣಾ ನದಿಗಳ ನಡುವಣ ರಾಯಚೂರು ದೋಆಬ್ ಪ್ರದೇಶ ದಖನ್ನಿನ ಕಾಳಗದ ಕಣವಾಗಿತ್ತು.  ಅತ್ಯಂತ ದಕ್ಷಿಣದಲ್ಲಿರುವ ಕಾವೇರಿ ನದಿ ಅನೇಕ ಸಂಸ್ಕøತಿಗಳನ್ನು ಪೋಷಿಸಿ ಬೆಳೆಸಿದೆ.  ಇದು ದಕ್ಷಿಣದ ಗಂಗಾ ಎಂದು ಪ್ರಸಿದ್ಧವಾಗಿದೆ.  ಇವಲ್ಲದೆ ದಖನ್ನಿನಲ್ಲಿ ಇನ್ನೂ ಅನೇಕ ಸಣ್ಣ ನದಿಗಳಿವೆ.  ಭೂವೈe್ಞÁನಿಕವಾಗಿ ದಖನ್ ಪ್ರಸ್ಥಭೂಮಿ ಉತ್ತರ  ಭಾರತದ ಮೈದಾನಗಳಿಗಿಂತ ಹಳೆಯದು.
(ವಿ.ಜಿ.ಕೆ)

ಇತಿಹಾಸ : ದಖನ್ನಿನ ಪ್ರಾಚೀನ ಇತಿಹಾಸದ ಬಗ್ಗೆ ಮಾಹಿತಿಗಳಿಲ್ಲ.  ಇದು ಮುಖ್ಯವಾಗಿ ದ್ರಾವಿಡರ ನೆಲೆ.  ಪ್ರಾಚೀನ ಕಾಲದಲ್ಲಿ ಈ ಭಾಗದೊಂದಿಗೆ ಆರ್ಯರ ಸಂಪರ್ಕ ನಿಕಟವಾಗಿರಲಿಲ್ಲ.  ಇಲ್ಲಿ ಪೂರ್ವ ಶಿಲಾಯುಗದ ಹಾಗೂ ನವ ಶಿಲಾಯುಗದ ಅವಶೇಷಗಳು ಸಿಕ್ಕಿವೆ.  ಅವುಗಳಲ್ಲಿ ಪ್ರಧಾನನಾದುವು ಕಲ್ಲಿನ ಸಮಾಧಿಯ ಕಲ್ಲುದಿಬ್ಬಗಳು ಹಾಗೂ ಕಲ್ಲುಗುಡ್ಡಗಳು.  ಇತಿಹಾಸ ಕಾಲದ ಅನೇಕ ಶಾಸನಗಳು ಇಲ್ಲಿ ವಿಪುಲವಾಗಿ ದೊರೆತಿವೆ.  ಅಶೋಕನ ಶಾಸನಗಳು ಕರ್ನಾಟಕ ಭಾಗದಲ್ಲಿವೆ.  ಬಾಹುಬಲಿ ಮತ್ತು ಚಂದ್ರಗುಪ್ತ ದಖನ್ನಿನ ಭಾಗಕ್ಕೆ ಬಂದು ಶ್ರವಣಬೆಳಗೊಳದಲ್ಲಿದ್ದರು.

ಮೌರ್ಯರ ಪ್ರಭಾವ :  ದಖನ್ ಪ್ರಸ್ಥಭೂಮಿ ಇತಿಹಾಸ ಪ್ರಸಿದ್ಧ ರಾಜಮನೆತನಗಳ ಸಾಮ್ರಾಜ್ಯಗಳ ನಾಗರಿಕತೆಯ ಕೇಂದ್ರವಾಗಿತ್ತು.  ಸಾತವಾಹನರು, ಚಾಳುಕ್ಯರು, ರಾಷ್ಟ್ರಕೂಟರು, ಯಾದವ ದೊರೆಗಳು, ಹೊಯ್ಸಳರು, ಮುಂತಾದವರು ತಮ್ಮ ಸಾಮ್ರಾಜ್ಯಗಳನ್ನು ಕಟ್ಟಿ, ಶಾಂತಿ ಸಮರ ರಂಗಗಳಲ್ಲಿ ಮಹತ್ತ್ವದ ಸಾಧನೆಗಳಿಗೆ ಕಾರಣರಾದರು.  ದಖನ್ನಿನ ಕೆಲವು ಭಾಗಗಳಲ್ಲಿ ಮೊಟ್ಟ ಮೊದಲು ತಮ್ಮ ರಾಜಕೀಯ ಪ್ರಭಾವ ಬೀರಿದವರೆಂದರೆ ಮೌರ್ಯರು.  ಉತ್ತರ ದಖನ್ನಿನ ಕೆಲವು ಭಾಗಗಳು ವಿಶ್ವವಿಖ್ಯಾತ ದೊರೆ ಅಶೋಕನ ಅಧಿಪತ್ಯಕ್ಕೊಳಗಾಗಿದುವು.  ಅಶೋಕ ತನ್ನ ಸಾಮ್ರಾಜ್ಯದ ದಕ್ಷಿಣ ರಾಜ್ಯಗಳಿಗೆ ಶಾಂತಿದೂತರನ್ನು ಕಳುಹಿಸಿದ್ದನೆಂದು ಪ್ರತೀತಿ. ಬೌದ್ಧ ಮತ ಪ್ರಚಾರಕ್ಕಾಗಿ ರಕ್ಕಿತ ಮಹಾದೇವನನ್ನು ಅನುಕ್ರಮವಾಗಿ ಬನವಾಸಿ ಮತ್ತು  ಮಹಿಷಮಂಡಲಗಳಿಗೆ ಕಳುಹಿಸಿದ್ದನೆಂದು ತಿಳಿದು ಬಂದಿದೆ.  ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ, ಜಂಟಿಗ ರಾಮೇಶ್ವರ, ಸಿದ್ಧಾಪುರ, ಮಾಸ್ಕಿಗಳಲ್ಲಿ ಅಶೋಕನ ಶಿಲಾಶಾಸನಗಳು ದೊರಕಿವೆ.  ದಖನ್ನಿನ ಪ್ರದೇಶಗಳಲ್ಲಿ ಮೌರ್ಯರ ರಾಜ್ಯ ವಿಸ್ತರಣೆ, ಪ್ರಭಾವಗಳಿಗೆ ಇವು ಸಾಕ್ಷಿಯಾಗಿವೆ.

ಸಾತವಾಹನರು :  ಅಶೋಕನ ಮರಣಾನಂತರ ದಖನ್ ಸ್ಥಳೀಯ ಸ್ವತಂತ್ರ ರಾಜರ ಅಧಿಕಾರಕ್ಕೆ ಬಂತು.  ಇವರಲ್ಲಿ ಸಾತವಾಹನರು ಪ್ರಮುಖರು.  ಸುಮಾರು 450 ವರ್ಷಗಳ ಕಾಲ ರಾಜ್ಯವಾಳಿದ ಸಾತವಾಹನರು ಗೋದಾವರಿ ಮತ್ತು ಕೃಷ್ಣಾ ನದಿಗಳ ಮಧ್ಯದ ವಿಶಾಲ ಪ್ರದೇಶದ ಮೇಲೆ ತಮ್ಮ ಪ್ರಭುತ್ವ ಸ್ಥಾಪಿಸಿದ್ದರು.  ಮಹಾರಾಷ್ಟ್ರ ಮತ್ತು ಅದರ ನೆರಹೊರೆಯ ರಾಜ್ಯಗಳನ್ನೊಳಗೊಂಡ ವಾಯುವ್ಯ ದಖನ್ನಿನ ವರೆಗೆ ಸಾತವಾಹನರ ರಾಜ್ಯ ಹಬ್ಬಿತ್ತು.  ಸಾತವಾಹನರ ಮುಂಚಿನ ಶಿಲಾಶಾಸನಗಳು ಈಗಿನ ಪುಣೆ ಜಿಲ್ಲೆಯ ನಾನಾಗಡ ಮತ್ತು ನಾಸಿಕ್‍ಗಳ್ಲಿ ಸಿಕ್ಕಿವೆ.  ಪ್ರತಿಷ್ಠಾನ ನಗರ (ಆಧುನಿಕ ಪೈಥಾನ), ನಾಸಿಕ್ ಮತ್ತು ಧಾನ್ಯಕಟಕಗಳು ಸಾತವಾಹನರ ರಾಜಕೀಯ ಕೇಂದ್ರಗಳಾಗಿದ್ದುವೆಂದು ತಿಳಿದುಬಂದಿದೆ.  ಸಾತವಾಹನ ವಂಶವನ್ನು ಸ್ಥಾಪಿಸಿದ ಸಿಮುಖನ ವಂಶಜರು ಮಹಾರಾಷ್ಟ್ರ ಮತ್ತು ಮಾಳ್ವಗಳಲ್ಲಿ ತಮ್ಮ ಪ್ರಭುತ್ವ ಸ್ಥಾಪಿಸಿದರು. ದಕ್ಷಿಣಾಪಥಪತಿ ಎಂಬ ಬಿರುದು ಹೊಂದಿದ್ದ ಶ್ರೀ ಸಾತಕರ್ಣಿಯ ಕಾಲದಲ್ಲಿ ಮಧ್ಯ ಮತ್ತು ಪಶ್ಚಿಮ ಭಾರತಗಳನ್ನೊಳಗೊಂಡ ದಖನ್ನಿನ ಮೇಲ್ಭಾಗಗಳ ವಿಶಾಲಪ್ರದೇಶಗಳಲ್ಲಿ ಸಾತವಾಹನರು ಅಧಿಕಾರ ನಡೆಸಿದರು.  ದಖನ್ನಿನಾದ್ಯಂತ ಸಾತವಾಹನರ ಘನತೆ ಮತ್ತು ಅಧಿಕಾರ ವ್ಯಾಪಕವಾಗಿ ಹಬ್ಬಿದುವು.  ಇವರ ರಾಜ್ಯ ಉತ್ತರದಲ್ಲಿ ಕಾಠಿಯಾವಾಡದಿಂದ ಕೃಷ್ಣಾ ನದಿಯವರೆಗೂ ಪಶ್ಚಿಮದಲ್ಲಿ ಕೊಂಕಣದಿಂದ ಪೂರ್ವದಲ್ಲಿ ಬಿಹಾರದವರೆಗೂ ಹಬ್ಬಿತ್ತು.  ಸಾತವಾಹನರ ಪ್ರಾಬಲ್ಯ ಕ್ಷೀಣಿಸಿದ ಅನಂತರ ದಖನ್ನಿನ ರಾಜಕೀಯ ಏಕತೆ ಕಣ್ಮರೆಯಾಯಿತು.  ಗಂಗರು, ವಾಕಾಟಕರು, ಚೂಟರು, ಕದಂಬರು, ಮುಂತಾದವರು ದಖನ್ನಿನಲ್ಲಿ ಅಧಿಕಾರಾರೂಢರಾಗಿದ್ದರು.
ಸಮುದ್ರಗುಪ್ತನ ವಿಜಯ :  ಈ ಮಧ್ಯೆ ಉತ್ತರ ಭಾರತದಲ್ಲಿ ಅಧಿಕಾರದಲ್ಲಿದ್ದ ಗುಪ್ತವಂಶದ ಸಮುದ್ರಗುಪ್ತ ದಖನ್ನಿನ ರಾಜ್ಯಗಳನ್ನು ಗೆದ್ದುಕೊಂಡ.  ದಕ್ಷಿಣ ರಾಜ್ಯಗಳ ಮೇಲೆ  ನಡೆಸಿದ ಆಕ್ರಮಣದ ಕಾಲದಲ್ಲಿ ಸೋತುಹೋದ ದೊರೆಗಳ ರಾಜ್ಯಗಳನ್ನು ಅವನು ವಶಪಡಿಸಿಕೊಳ್ಳಲಿಲ್ಲ.  ಅವರು ಗುಪ್ತ ಸಾರ್ವಭೌಮತ್ವವನ್ನೊಪ್ಪಿಕೊಂಡು ತಂತಮ್ಮ ರಾಜ್ಯಗಳಲ್ಲಿ ಆಳ್ವಿಕೆ ನಡೆಸಲು ಸಮುದ್ರಗುಪ್ತ ಅವಕಾಶ ಮಾಡಿಕೊಟ್ಟ.

ಚಾಳುಕ್ಯರು :  ಗುಪ್ತ ಸಾಮ್ರಾಜ್ಯ ಪತನ ಹೊಂದಿದ ಮೇಲೆ ದಖನ್ ಮತ್ತೆ ಉತ್ತರ ಭಾರತದಿಂದ ಪ್ರತ್ಯೇಕಗೊಂಡಿತು.  ಬಾದಾಮಿ ಚಾಳುಕ್ಯ ಸಾಮ್ರಾಜ್ಯ (ಸು.500 - 757) ಎದ್ದಿತು.  ಈ ವಂಶದ ಅತ್ಯಂತ ಪ್ರಸಿದ್ಧ ದೊರೆ ಇಮ್ಮಡಿ ಪುಲಕೇಶಿ (ಸು 610-642) ಕದಂಬರನ್ನೂ ಗಂಗರನ್ನೂ ಇತರ ನೆರೆಹೊರೆಯವರನ್ನೂ ಜಯಿಸಿ ದಖನ್ನಿನ ಹೆಸರಾಂತ ದೊರೆಯೆನಿಸಿಕೊಂಡ.  ನರ್ಮದಾ ನದಿಯನ್ನು ದಾಟಿ ದಕ್ಷಿಣ ಭಾರತವನ್ನು ಗೆಲ್ಲಲು ಪ್ರಯತ್ನಿಸಿದ ಹರ್ಷನನ್ನು ಸೋಲಿಸಿ, ಪುಲಕೇಶಿ ಅಪರಿಮಿತ ಕೀರ್ತಿಗೌರವಗಳನ್ನು ಸಂಪಾದಿಸಿದ.  ದಕ್ಷಿಣಾಪಥೇಶ್ವರ ಎಂಬ ಬಿರುದು ಧರಿಸಿದ.  ಪುಲಕೇಶಿಯ ಕಾಲದಲ್ಲಿ ದಖನ್ನಿನ ಕೀರ್ತಿ ದೂರದ ಪರ್ಷಿಯ ದೇಶದ ವರೆಗೂ ಹಬ್ಬಿತ್ತು. ಪುಲಕೇಶಿಯ ಹಿರಿಮೆ, ಶಕ್ತಿ, ಸಾಮಥ್ರ್ಯಗಳನ್ನು ಕೇಳಿದ್ದ ಪರ್ಶಿಯನ್ ದೊರೆ ಎರಡನೇ ಖುಸ್ರು ಪುಲಕೇಶಿಯ ಆಸ್ಥಾನಕ್ಕೆ ತನ್ನ ರಾಯಭಾರಿಯನ್ನು ಕಳುಹಿಸಿದ್ದ.
ರಾಷ್ಟ್ರಕೂಟರು :  ಬಾದಾಮಿ ಚಾಳುಕ್ಯರ ಅನಂತರ ದಖನ್ನಿನ ಪ್ರಭುತ್ವ ರಾಷ್ಟ್ರಕೂಟರ ಕೈಸೇರಿತು.  ದಕ್ಷಿಣ ಭಾರತದ ಇತಿಹಾಸದ ವಿವಿಧ ಕಾಲಾವಧಿಗಳಲ್ಲಿ ರಾಷ್ಟ್ರಕೂಟರು ದಖನ್ನಿನ ವಿವಿಧ ಭಾಗಗಳಲ್ಲಿ ಅಧಿಕಾರ ನಡೆಸಿದರು.  ರಾಷ್ಟ್ರಕೂಟ ವಂಶದ ಅತ್ಯಂತ ದೊಡ್ಡ ದೊರೆ ಅಮೋಘವರ್ಷ (ಸು. 815-877).  973 ರಲ್ಲಿ ಕಲ್ಯಾಣಿ ಚಾಳುಕ್ಯರು ರಾಷ್ಟ್ರಕೂಟರನ್ನು ಉರುಳಿಸಿ ಪ್ರಬಲರಾದರು.  ಇವರ ಆಳ್ವಿಕೆ 1190 ರ ವರೆಗೂ ಮುಂದುವರಿಯಿತು.  ಅನಂತರ ದಖನ್ ಮೂರು ರಾಜವಂಶಗಳ ಆಳ್ವಿಕೆಗೆ ಒಳಗಾಯಿತು. ದೇವಗಿರಿಯಿಂದ ಯಾದವರೂ ದ್ವಾರಸಮುದ್ರದಿಂದ ಹೊಯ್ಸಳರೂ ವಾರಂಗಲ್ಲಿನಿಂದ ಕಾಕತೇಯರೂ ಆಳಿದರು.  ಇವರ ನಡುವೆ ಸೌಮನಸ್ಯ ಇರಲಿಲ್ಲ.  ಇವರು ಒಬ್ಬೊಬ್ಬರಾಗಿ ಅಲ್ಲಾವುದ್ದೀನ್ ಖಿಲ್ಜಿಯ ಆಕ್ರಮಣಕ್ಕೆ ತುತ್ತಾದರು.

ಮುಸ್ಲಿಮ್ ಆಕ್ರಮಣ:  ದಖನ್ ಅಥವಾ ದಕ್ಷಿಣಾಪಥ 14 ನೆಯ ಶತಮಾನದಿಂದ ಮುಸ್ಲಿಮರ ಆಕ್ರಮಣಗಳಿಗೆ ಗುರಿಯಾಯಿತು.  ವಿಂಧ್ಯ ಪರ್ವತಗಳ ಆಚೆಗಿನ ದಖನ್ನಿನ ರಾಜ್ಯಗಳ ಮೇಲೆ ವ್ಯವಸ್ಥಿತಿ ದಾಳಿ ನಡೆಸಿದ ಮೊಟ್ಟ ಮೊದಲನೆಯ ಮುಸ್ಲಿಂ ಯೋಧ ಅಲಾ - ಉದ್ - ದೀನ್ ಖಿಲ್ಜಿ.  ಅವನು 14 ನೆಯ ಶತಮಾನದ ಆದಿಯಲ್ಲಿ ದೇವಗಿರಿಯನ್ನೂ ವಾರಂಗಲ್ಲನ್ನೂ ದ್ವಾರಸಮುದ್ರವನ್ನೂ ಜಯಿಸಿದ.  ಅನಂತರ ಅವನು ತನ್ನ ಸೇನಾನಿ ಮಲಿಕ್ ಕಾ¥sóÀುರನನ್ನು ದಕ್ಷಿಣಕ್ಕೆ ಕಳಿಸಿದ.  ಅವನು ಪಾಂಡ್ಯ ರಾಜಧಾನಿ ಮಧುರೆಯನ್ನು ಜಯಿಸಿ ರಾಮೇಶ್ವರದವರೆಗೂ ಮುನ್ನಡೆದ.   ಕನ್ಯಾಕುಮಾರಿಯವರೆಗೆ ಇಡೀ ಪರ್ಯಾಯದ್ವೀಪೀಯ ಭಾರತ ಮುಸ್ಲಿಮರಿಗೆ  ಮಣಿಯಿತು;  ಆದರೆ ದೆಹಲಿಯ ಸುಲ್ತಾನರ ಆಳ್ವಿಕೆ ದಕ್ಷಿಣದಲ್ಲಿ ಬಹುಕಾಲ ಮುಂದುವರಿಯಲಿಲ್ಲ; ಮಹಮ್ಮದ್-ಬಿನ್-ತುಗಲುಕನ ಕಾಲದಲ್ಲಿ ಸ್ವತಂತ್ರವಾಯಿತು.  ದೆಹಲಿಯ ಸುಲ್ತಾನನ ವಿರುದ್ಧ ಅಹ್‍ಸಾನ್‍ಶಾಹ ಬಂಡು ಹೂಡಿ ಸ್ವತಂತ್ರ ರಾಜ್ಯ ಸ್ಥಾಪಿಸಿದ (1335).  ಮುಂದಿನ ಹತ್ತು ವರ್ಷಗಳಲ್ಲಿ ನರ್ಮದಾ ಮತ್ತು ಕೃಷ್ಣಾ ನದಿಗಳ ನಡುವಣ ಪ್ರದೇಶದಲ್ಲಿ ಬಹಮನಿ ಮತ್ತು ವಿಜಯನಗರ ಸಾಮ್ರಾಜ್ಯಗಳು ಹುಟ್ಟಿಕೊಂಡುವು. ದಖನ್ನಿನ ಆಡಳಿತ ಇವೆರಡು ಪ್ರಭುತ್ವಗಳ ನಡುವೆ ಹಂಚಿಹೋಯಿತು.  ಆದರೆ 16 ನೆಯ ಶತಮಾನದ ಉತ್ತರಾರ್ಧದ ವೇಳೆಗೆ ಬಹಮನಿ ರಾಜ್ಯ ಐದು ರಾಜ್ಯಗಳಾಗಿ ಒಡೆಯಿತು.  ವಿಜಯನಗರದ ಹಿಂದೂ ದೊರೆಗಳು ಕೃಷ್ಣಾ ನದಿಯ ದಕ್ಷಿಣ ಭಾಗದಲ್ಲಿ 1565 ರ ವರೆಗೂ ಆಳ್ವಿಕೆ ನಡೆಸಿದರು.  ಬಿಜಾಪುರ, ಅಹಮದ್‍ನಗರ, ಗೋಲ್ಕೊಂಡ ಮತ್ತು ಬೀದರ್ ಸುಲ್ತಾನರು ಒಂದಾಗಿ ವಿಜಯನಗರವನ್ನು ಸೋಲಿಸಿದರು. ಆದರೆ ಅವರ ಒಗ್ಗಟ್ಟು ಮುಂದುವರಿಯಲಿಲ್ಲ.  ಅವರ ರಾಜ್ಯಗಳು 17 ನೆಯ ಶತಮಾನದಲ್ಲಿ ಒಂದೊಂದಾಗಿ ಮೊಗಲ್ ಸಾಮ್ರಾಜ್ಯಕ್ಕೆ ಅಧೀನವಾದುವು.  ಶಿವಾಜಿಯಿಂದ ಸ್ಥಾಪಿತವಾದ ಮರಾಠಾ ಸಾಮ್ರಾಜ್ಯವೂ ಮೊಗಲರಿಂದ ಪರಾಜಯ ಹೊಂದಿತು.  ಮತ್ತೊಮ್ಮೆ ತಾತ್ಕಾಲಿಕವಾಗಿ ದಖನ್ ಪ್ರದೇಶ ಭಾರತದೊಂದಿಗೆ ರಾಜಕೀಯವಾಗಿ ಒಂದಾಯಿತು.  ಆದರೆ ಪರಿಸ್ಥಿತಿ ಬಹುಕಾಲ ಮುಂದುವರಿಯಲಿಲ್ಲ.  ಮರಾಠರು ಮತ್ತೆ ಸ್ವತಂತ್ರರಾಗಿ ಪ್ರಬಲರಾದರು.  ಮೊಗಲು ಮಾಂಡಲಿಕನಾಗಿದ್ದ ನಿeóÁಮ ಉಲ್ ಮುಲ್ಕ್ ಸ್ವತಂತ್ರನಾಗಿ ಹೈದರಾಬಾದಿನಲ್ಲಿ  ಪ್ರಭುತ್ವ ಸ್ಥಾಪಿಸಿದ.  ನಿಜಾóಮ್  ಹಾಗೂ ಮರಾಠರ ನಡುವೆ ವಿಭಾಗವಾಯಿತು.  ಈ ವೇಳೆಗೆ ಐರೋಪ್ಯ ವ್ಯಾಪಾರಿಗಳು ದಕ್ಷಿಣ ಭಾರತದಲ್ಲಿ ಕಾಲೂರುತ್ತಿದ್ದರು.

ದಖನ್ನಿನಲ್ಲಿ ಬ್ರಿಟಿಷ್ ಪ್ರಭುತ್ವದ ಏಳಿಗೆ :  ಬ್ರಿಟಿಷರು ಭಾರತದಲ್ಲಿ ತಮ್ಮ ಪ್ರಭುತ್ವವನ್ನು ಬೆಳೆಸಿಕೊಳ್ಳುತ್ತಿದ್ದ ಕಾಲದಲ್ಲಿ ದಖನ್ನಿನಲ್ಲಿ ಅನೇಕ ಪ್ರಭಾವಶಾಲಿ ನವಾಬರುಗಳಿದ್ದರು.  ಅವರಲ್ಲಿ ಕರ್ಣಾಟಿಕದ ನವಾಬನಾಗಿದ್ದ ಮಹಮ್ಮದಾಲಿ  ಪ್ರಮುಖನಾಗಿದ್ದ.  ಫ್ರೆಂಚರು, ಬ್ರಿಟಿಷರು, ಹೈದರಾಬಾದಿನ ನಿಜಾಮ ಮತ್ತು ಮೊಗಲ್ ದೊರೆಗಳು ಸಹ ಕರ್ಣಾಟಿಕದ ನವಾಬನ ಸ್ಥಾನಮಾನಗಳನ್ನು ಮಾನ್ಯ ಮಾಡಿದ್ದುದರಿಂದ ದಕ್ಷಿಣ ಭಾರತದ ರಾಜಕೀಯ ರಂಗದಲ್ಲಿ ಮಹಮ್ಮದಾಲಿ ಪ್ರಮುಖ ವ್ಯಕ್ತಿಯಾಗಿದ್ದ.  ದಖನ್ ಪ್ರಸ್ಥಭೂಮಿಯ ದಕ್ಷಿಣದಲ್ಲಿ ಬೆಳೆಯುತ್ತಿದ್ದ ಮೈಸೂರಿನಲ್ಲಿ ಹೈದರ್ ಅಲಿ ಸರ್ವಾಧಿಕಾರಿಯಾದ.   ಹೈದರಾಬಾದಿನ ನಿಜಾóಮ, ಮರಾಠರು ಮತ್ತು ಹೈದರ್ ಅಲಿಯ ಸಹಾಯದಿಂದ ಮಹಮ್ಮದಾಲಿ ತನ್ನ ಅಧಿಕಾರ ಹೆಚ್ಚಿಸಿಕೊಳ್ಳುವ ಹಂಚಿಕೆಯಲ್ಲಿದ್ದ.  ಆದರೆ ಬ್ರಿಟಿಷರು ಭಾರತದಲ್ಲಿ ತಮ್ಮ ಪ್ರಭುತ್ವವನ್ನು ಸುಭದ್ರಗೊಳಿಸಲು ಸಮಯ ಸಾಧಿಸುತ್ತಿದ್ದರು.  ಅವರು ದಖನ್ನಿನ ಭಾಗಗಳನ್ನು ಒಂದೊಂದಾಗಿ ತಮ್ಮ ಬಲೆಗೆ ಹಾಕಿಕೊಳ್ಳುತ್ತ ಬಂದರು.  ಹೈದರ್ ಅಲಿಯ ಅನಂತರ ಮೈಸೂರನ್ನು ಆಳುತ್ತಿದ್ದ ಟೀಪ್ಪುವನ್ನು ಸೋಲಿಸಿ ಅವನ ರಾಜ್ಯವನ್ನು ವಶಪಡಿಸಿಕೊಂಡದ್ದು  ದಖನ್ನಿನಲ್ಲಿ ಬ್ರಿಟಿಷರ ಮೊದಲನೆಯ ದೊಡ್ಡ ಜಯ.  ಅನಂತರ ಅವರು ತಂಜಾವೂರು ಮತ್ತು ಕರ್ಣಾಟಿಕಗಳನ್ನು ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡರು.  ಪೇಶ್ವೆಯ ಅಧೀನದಲ್ಲಿದ್ದ ಅನೇಕ ಪ್ರದೇಶಗಳಿಗೆ ಬ್ರಿಟಿಷರು ಒಡೆಯರಾದರು.  ಅನಂತರ ಇಂಗ್ಲಿಷರು ಅನುಸರಿಸಿದ ಸಹಾಯಕ ಸೈನ್ಯಪದ್ಧತಿ.  ದತ್ತು ಮಕ್ಕಳ ಸಿಂಹಾಸನದ ಹಕ್ಕಿನ ಬಗ್ಗೆ ತಳೆದ ವಿಚಿತ್ರ ರಾಜಕೀಯ ನೀತಿ, ಅವರು ದೇಶೀಯ ಸಂಸ್ಥಾನಗಳ ಮೇಲೆ ನಡೆಸಿದ ಆಕ್ರಮಣ - ಇವುಗಳಿಂದಾಗಿ ದಖನ್ ಸಂಸ್ಥಾನಗಳು ಬೆಳೆಯುತ್ತಿದ್ದ ಬ್ರಿಟಿಷ್ ಸಾಮ್ರಾಜ್ಯದಲ್ಲಿ ಸೇರಿಹೋದವು.  ನರ್ಮದಾ ನದಿಯಿಂದ ಹಿಡಿದು ಕನ್ಯಾಕುಮಾರಿಯವರೆಗಿನ ಪ್ರದೇಶವೆಲ್ಲ ಬ್ರಿಟಿಷ್ ಚಕ್ರಾಧಿಪತ್ಯದಲ್ಲಿ ಸೇರಿತು.  1947 ರ ಆಗಸ್ಟ್ 15 ರಂದು ಸ್ವತಂತ್ರ ಭಾರತದ ಅಂಗವಾಗಿ ಮುಂದುವರಿಯಿತು.  ಇದು ಈಗ ಭಾರತ ಗಣರಾಜ್ಯದ ವಿವಿಧ ರಾಜ್ಯಗಳಲ್ಲಿ ಸೇರಿದೆ.
(ಜಿ.ಎಂ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ